ಕಾಲಯವನ

 ಗರ್ಗಮಹರ್ಷಿಯ ಮಗ. ಕಪ್ಪಾಗಿದ್ದುದರಿಂದ ಈ ಹೆಸರಾಯಿತು. ಯಾದವರ ಪುರೋಹಿತನಾದ ಗರ್ಗಮುನಿ ನಿಷ್ಠಾವಂತ ಬ್ರಹ್ಮಚಾರಿ. ಕೆಲವು ಯಾದವರು ಇವನನ್ನು ಹೇಡಿ ಎಂದು ಅಪಮಾನ ಮಾಡಿದ್ದರಿಂದ ಸಿಟ್ಟುಗೊಂಡ ಮುನಿ ಯಾದವರನ್ನು ಧ್ವಂಸಮಾಡತಕ್ಕ ಒಬ್ಬ ಮಗ ಬೇಕೆಂದು ತನ್ನ ತಪೋಬಲದಿಂದ ಶಿವನನ್ನು ಬೇಡಿ ಕಾಲಯವನನ್ನು ಪಡೆದ. ಯಾದವರ ಶತೃವಾದ ಯವನ ದೇಶದ ರಾಜ ಮಗುವಾಗಿದ್ದ ಕಾಲಯವನನ್ನು ತೆಗೆದುಕೊಂಡು ಹೋಗಿ ಸಾಕಿದ. ಸದಾ ಯಾದವರನ್ನು ಕಾಡುತ್ತಿದ್ದ ಈತನ ಮರಣ ಯಾದವರಿಂದ ಅಸಂಭವವೆಂಬ ರಹಸ್ಯ ಕೃಷ್ಣನಿಗೆ ತಿಳಿದಿತ್ತು. ಕೃಷ್ಣ ಇವನನ್ನು ಕೊಲ್ಲಲು ಒಂದು ಉಪಾಯ ಹೂಡಿದ. ಒಂದು ಸಲ ಇವನಿಗೆ ತಾನು ಸೋತವನಂತೆ ನಟಿಸಿ ಕೃಷ್ಣ ತಪ್ಪಿಸಿಕೊಂಡ ಓಡಿದ. ಕಾಲಯವನ ಕೃಷ್ಣನನ್ನು ಹಿಂಬಾಲಿಸಿ ಹೋದ. ದೇವಾಸುರ ಯುದ್ಧದಲ್ಲಿ ದೇವತೆಗೆ ಸಹಾಯ ಮಾಡಿದ ಮುಚುಕುಂದ ಚಕ್ರವರ್ತಿ ವಿಶ್ರಾಂತಿಯನ್ನು ಅಪೇಕ್ಷಿಸಿ ಯಾರೇ ಆಗಲಿ ತನ್ನ ನಿದ್ರೆಗೆ ಭಂಗ ತಂದವರು ಕೂಡಲೆ ಭಸ್ಮವಾಗಲೆಂಬ ವರ ಪಡೆದು ಗವಿಯೊಂದರಲ್ಲಿ ಮಲಗಿ ನಿದ್ರಿಸುತ್ತಿದ್ದ. ಕೃಷ್ಣ ಆ ಗವಿಯೊಳಗಡೆ ಹೋಗಿ ಅವಿತುಕೊಂಡ. ಹಿಂಬಾಲಿಸಿ ಬಂದ ಕಾಲಯವನ ಕತ್ತಲಲ್ಲಿ ಮಲಗಿದ್ದ ಮುಚುಕುಂದನನ್ನೇ ಕೃಷ್ಣನೆಂದು ಭ್ರಮಿಸಿ ಅವನನ್ನು ಕಾಲಿಂದ ಒದ್ದ. ನಿದ್ರಾಭಂಗದಿಂದ ಎಚ್ಚೆತ್ತ ಮುಚುಕುಂದನ ದೃಷ್ಟಿಪಾತದಿಂದ ಕಾಲಯವನ ಭಸ್ಮವಾದ. ಈ ವೃತ್ತಾಂತ ಹರಿವಂಶ, ವಿಷ್ಣುಪುರಾಣಗಳಲ್ಲಿ ಬಂದಿದೆ.        

     (ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ